ಖಾಲ್ಸಾ	-
	ಸಿಕ್ಖರ ಯುದ್ಧೋತ್ಸಾಹಿ ಮತೀಯ ಸಂಸ್ಥೆ, ಸಿಕ್ಖರ 10ನೆಯ ಗುರುಗೋವಿಂದ 1708ರಲ್ಲಿ ಕೊಲೆಯಾದ ಅನಂತರ ಅವರ ನಾಯಕನಾಗಿದ್ದ ಬಾಂದಾ 1716ರಲ್ಲಿ ಮರಣದಂಡನೆಗೆ ಗುರಿಯಾದಾಗ ಸಿಕ್ಖರ ಮತಧರ್ಮ ರಕ್ಷಣೆಗಾಗಿ ಫೈಜûುಲ್ಲಾಪುರದ ಕಪೂರ್‍ಸಿಂಗ್ ಇದನ್ನು ಸ್ಥಾಪಿಸಿದ. ಗುರುಗೋವಿಂದಸಿಂಗ್ ಸ್ವತಃ ಇದನ್ನು ಸ್ಥಾಪಿಸಿದನೆಂಬ ವಾದವೂ ಇದೆ. ಈ ವಾದವನ್ನು ಒಪ್ಪಿದರೂ ಕಪೂರ್‍ಸಿಂಗ್ ಈ ಸಂಸ್ಥೆಗೆ ನಿಶ್ಚಿತ ರೂಪ ಕೊಟ್ಟನೆಂಬುದಂತೂ ನಿಜ. ಔರಂಗ್eóÉೀಬನ ಮತಾಂಧ ನೀತಿಯಿಂದಾಗಿ ಕಷ್ಟಗಳನ್ನನುಭವಿಸುತ್ತಿದ್ದ ಸಿಕ್ಖರಲ್ಲಿ ಗುರುಗೋವಿಂದ ಸಿಂಗ್ ಧೈರ್ಯ ಸಾಹಸಗಳನ್ನು ತುಂಬಿ ನವಚೈತನ್ಯವನ್ನು ಮೂಡಿಸಿದ. ಎಲ್ಲ ಮತಗಳವರೂ ಸಮಾನರೆಂದೂ ಖಾಲ್ಸಾ ಪಂಥದಲ್ಲಿ ಯಾವ ರೀತಿಯ ಭೇದ ಭಾವಗಳೂ ಇಲ್ಲವೆಂದೂ ಗೋವಿಂದ ಸಿಂಗ್ ಬೋಧಿಸಿದ. ಈ ಸಂಸ್ಥೆ ಪ್ರಾರಂಭವಾದಂದಿನಿಂದ ಪ್ರತಿಯೊಬ್ಬ ಸಿಕ್ಖ್ ಮತೀಯನೂ ಯೋಧನಾದ. ಪ್ರತಿಯೊಬ್ಬ ಸದಸ್ಯನೂ ಉದ್ದವಾದ ಕೂದಲನ್ನೂ, ಬಾಚಣೆಗೆಯನ್ನೂ, ಕಬ್ಬಿಣದ ಒಂದು ಬಳೆಯನ್ನೂ ಒಂದು ಕತ್ತಿಯನ್ನೂ ಹೊಂದಿರಬೇಕು; ಮತ್ತು ಷರಾಯಿ ಧರಿಸಬೇಕು; ಹೊಗೆಸೊಪ್ಪು ಮತ್ತಿತರ ಮಾದಕ ಪದಾರ್ಥಗಳನ್ನು ಸೇವಿಸಕೂಡದು; ಉಷಃ ಕಾಲದಲ್ಲೆದ್ದು ಸ್ನಾನಮಾಡಿ ಗುರುಗಳಿಂದ ರಚಿತವಾದ ಸ್ತ್ರೋತ್ರಗಳ ಪಠಣ ಮಾಡಬೇಕು-ಎಂಬವು ಖಾಲ್ಸಾಸಂಸ್ಥೆಯ ಕೆಲವು ನಿಯಮಗಳು. ಖಾಲ್ಸಾ ಸಭೆ ವೈಶಾಖ ಮತ್ತು ದೀಪಾವಳಿಯ ಮಾಸಗಳಲ್ಲಿ ಅಮೃತಸರದಲ್ಲಿ ಸೇರುತ್ತಿತ್ತು. ಎಲ್ಲರೂ ಒಟ್ಟುಗೂಡಿ ತೀರ್ಥ ಪ್ರಸಾದ ಸ್ವೀಕರಿಸಬೇಕಿತ್ತು. ಸಿಕ್ಖರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸರ್ವಸಮಾನತೆಯ ಆಧಾರದ ಮೇಲೆ ಪ್ರಯತ್ನ ಕೈಗೊಳ್ಳಲಾಗುತ್ತಿತ್ತು. ರಾಷ್ಟ್ರೀಯ ಸಂತರ ಸೇನೆಯಾಗಿ ರೂಪಿತವಾದ ಖಾಲ್ಸಾದ ಸ್ಥಾಪನೆಯ ಅನಂತರ ಸಿಕ್ಖರಲ್ಲಿ ಒಗ್ಗಟ್ಟು ಮೂಡಿತು. ತಮ್ಮ ಧರ್ಮದ ರಕ್ಷಣೆಗಾಗಿ ಪ್ರಾಣ ತೆರಲೂ ಅವರು ಸಿದ್ಧರಾದರು. ಮೊಗಲ್ ಸಾಮ್ರಾಜ್ಯದ ವಿನಾಶಕ್ಕಾಗಿ ಬಹುವಾಗಿ ಹೋರಾಡಿದರು.			(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ